Sunday, December 22, 2013

ಚಿಂತನೆ


ಚಿಂತನೆ 

 ಮಿದುಳ ಬಳ್ಳಿ ಆಳಕಿಳಿದರೆ ಸಾಕು 

ಗೋಳ ನೀ ಕೆದಕುವುದು ಏಕೆ?

ಇಲ್ಲವೇ ಹಸಿ ನೆನಪುಗಳು ಹುಸಿಯಾಗಿ 

ಹೊತ್ತು ತಂದೆ ಮತ್ತೆ ಹಸಿರಾಗಲೇಕೆ ?

 

ಕಳೆದ ದಿನ ರಾತ್ರಿಗಳು ಲೆಕ್ಕವಿಲ್ಲ

ನೆನಪು ಮಾಸದ ಕನಸಿಗೆ ಪುಕ್ಕವಿಲ್ಲ 

ಹಾರಲದು ಹವಣಿಸಲು ದೇಹ ತೂಕ

ಹಾಡುತಿವೆ ಹಕ್ಕಿಗಳು ಸ್ವರ ಹೊರಡುತ್ತಿಲ್ಲ 

 

ಸ್ವಚ್ಛಂದ ಇದ್ದಾಗ ಇಚ್ಛೆಯಾ ಹಣ್ಣು

ಪಂಜರದಿ ಕೂಡಿಟ್ಟು ಕೊಟ್ಟಿದ್ದು ಹುಣ್ಣು 

ಮರಗಿಡವ ಬೋಳಿಸಿಹೆ ಏಕಯ್ಯಾ ಹೀಗೆ?

ನಿನ್ನಂತೆ ಜೀವಿಗಳು ಕುರುಡಾಯ್ತೆ ಕಣ್ಣು?

 

ಆ ಜಲ, ನೆಲ, ಬೆಟ್ಟ, ಆಕಾಶ ಗುಡ್ಡ

ಕೊಟ್ಟರು ನಿನ ಪೂರ್ವಜರು ನೀನಾದೆ ದಡ್ಡ

ಕೆಡಿಸಿ, ಕಡಿಸಿ, ಗಣಿಗಾಣಿಸಿ ಕುಲಗೆಡಿಸಿ

ಸ್ವಾರ್ಥ ಸಾಧನೆಗೆ ಬಿದ್ದೆ ಮಾಡಿಕೊಂಡೆ ದುಡ್ಡ

 

ಮರೆತೆ, ನಿನ್ನದೂ ಇದೆ ಸಂತಾನ ಇಲ್ಲಿ

ಕೊಡುವೆಯಾ ಕೊಳವೆಗಳು ಬತ್ತಿ ಹೋದ ನಲ್ಲಿ?

ಸಮಯವಿದೆ ಎಚ್ಚೆತ್ತುಕೋ ಓ ಮನುಜ
ಇಲ್ಲವಾದರೆ ಇರದು ನಿನಗೆ ಉಳಿಗಾಲವಿಲ್ಲಿ  

5 comments:

  1. ಆ ಜಲ, ನೆಲ, ಬೆಟ್ಟ, ಆಕಾಶ ಗುಡ್ಡ
    ಕೊಟ್ಟರು ನಿನ ಪೂರ್ವಜರು ನೀನಾದೆ ದಡ್ಡ
    ಕೆಡಿಸಿ, ಕಡಿಸಿ, ಗಣಿಗಾಣಿಸಿ ಕುಲಗೆಡಿಸಿ
    ಸ್ವಾರ್ಥ ಸಾಧನೆಗೆ ಬಿದ್ದೆ ಮಾಡಿಕೊಂಡೆ ದುಡ್ಡ
    - ಇದು ನಿರಂತರ ನಡೆಯುತ್ತಲೇ ಇರುತ್ತದೆ ಸರ್... ಚಿಂತನೆಯ ಕವನ ಸುಂದರ ಸಾಲುಗಳು

    ReplyDelete
  2. ಭೂಮಿಯಲಿ ಮನುಜನಿಗಿಂತಲೂ ಸ್ವಾರ್ಥಿ ಮತ್ತೊಬ್ಬನಿಲ್ಲ. ನಿಂತ ರೆಂಬೆಯ ಕಡಿವಾಗಲೂ ಅವನಿಗಿಲ್ಲ ಖಬರೂ, ಎಲ್ಲ ಅಳಿಸಿ ತನ್ನಿಷ್ಟಕೆ ತೋಡಿಕೊಳ್ಳುವ ತನ್ನದೇ ಗುಂಡಿ ಕಬರೀಸ್ಥಾನದಲ್ಲಿ.

    ReplyDelete
  3. ನಮ್ಮ ಮುಂದಿನ ಸಂತಾನಕ್ಕೆ ಏನು ಕೊಡುತ್ತೀವಿ? ಮರುಭೂಮಿಯನ್ನು ಅಥವಾ ಅಣುಬಾಂಬಿನ ರುದ್ರಭೂಮಿಯನ್ನು!

    ReplyDelete
  4. ಕೊನೆ ಗೊತ್ತಿದ್ದೂ ಮತ್ತೆ ಮತ್ತೆ ಮಾಡುವ ಸ್ವಾರ್ಥಕ್ಕೆ ಹಿಡಿದ ಕನ್ನಡಿಯಂತೆ ಇದೆ ಪ್ರಶ್ನೆ ಗಳು....

    ಹೊಸ ವರ್ಷದ ಶುಭಾಶಯಗಳು

    ReplyDelete
  5. ಭಯ್ಯಾ ,,,
    ನಿಜಕ್ಕೂ ಒಮ್ಮೊಮ್ಮೆ ಭಯವಾಗುತ್ತೆ ಎತ್ತ ಸಾಗುತ್ತಿದ್ದೇವೆ ನಾವು ಅಂತ. ಉಳಿಸಬೇಕೆಂದು ಪಣತೊಡಲು ಆಗದಿರುವುದು ಪರಿಸ್ಥಿತಿಯೋ , ಇಚ್ಚಾಶಕ್ತಿಯ ಕೊರತೆಯೋ ತಿಳಿಯುತ್ತಿಲ್ಲ ..

    ಅಲ್ಲೆಲ್ಲೋ ಮರುಭೂಮಿಯ ನಾಡಲ್ಲಿ ಕುಳಿತಿದ್ದರೂ ಸ್ವರ್ಣಭೂಮಿಯನ್ನು ಉಳಿಸಿ ಎನ್ನುವ ಸಂದೇಶ ಹೊತ್ತು ತಂದ ಕವನ ಚಂದ ...

    ReplyDelete